50+ ಆಸರೆ

ವಯಸ್ಸು ಅರ್ಧ ಶತಕ ದಾಟಿದರೆ ಸಾಕು, 'ನಾವು ಅಸಹಾಯಕರು ನಮ್ಮಿಂದೇನಾಗದು, ಮುಂದೇನು?..' ಎಂಬ ಕೊರಗು ಎಲ್ಲಾ ಹಿರಿಯ ನಾಗರಿಕರಲ್ಲಿರುವ ಬಹುಮುಖ್ಯ ಪಿಡುಗು. ಈ ಆತಂಕವೇ ಅವರನ್ನು ಮತ್ತಷ್ಟು ಖಿನ್ನರನ್ನಾಗಿಸುತ್ತದೆ ಕೂಡಾ. ದಿನ ಬೆಳಗಾದರೆ ಪತ್ರಿಕೆ, ಮಾಧ್ಯಮಗಳಲ್ಲಿ ಬರುತ್ತಿರುವ ನಿರಂತರ ಸುದ್ದಿಗಳಲ್ಲಿ ಹಿರಿಯರ ಮೇಲಿನ ದೌರ್ಜನ್ಯ, ಬೆದರಿಕೆ, ಕೊಲೆ, ಹಲ್ಲೆಗಳಂಥ ಸುದ್ದಿಗಳು ಹಿರಿಯ ಜೀವಗಳನ್ನು ಮತ್ತಷ್ಟು ಕುಗ್ಗಿಸಿವೆ.
ಹಾಗಾಗಿ ಹಿರಿಯ ನಾಗರಿಕರು ತಮ್ಮ ಸ್ವಾಭಿಮಾನ, ಅನುಭವ, ಹಿರಿತನ ಬದಿಗಿಟ್ಟು ನಿರ್ದಾಕ್ಷಿಣ್ಯವಾಗಿ ಮನೆಮಂದಿ, ನೆರೆಹೊರೆಯವರ ದೃಷ್ಟಿಯಲ್ಲಿ ನಿಷ್ಪ್ರಯೋಜಕರಾಗಿ, ಭಾರವಾಗಿ ತಮ್ಮ ಜೀವನದ ಅಂತ್ಯೋದಯ ದಿನಗಳನ್ನು ಸವೆಸಬೇಕಾದ ಸ್ಥಿತಿ ಇಂದಿದೆ. ಓಡುವ ಬದುಕಿನ ಭರಾಟೆ ಮಧ್ಯ ತಮ್ಮ ಬಗ್ಗೆಯೇ ತಾವು ಗಮನಹರಿಸಿಕೊಳ್ಳಲಾರದ ಈ ದಿನಗಳಲ್ಲಿ ಯಾರಿಗೂ ಮನೆ ಹಿರಿಯರನ್ನು ನೋಡಿಕೊಳ್ಳುವ, ಅವರ ಬೇಕು ಬೇಡಗಳನ್ನು ಕೇಳುವ ಪುರಸೊತ್ತಿಲ್ಲ. ಇದರಿಂದಾಗಿ ಹಿರಿ ಜೀವಗಳು ತಮ್ಮ ನಿರ್ವಹಣೆಯನ್ನು ತಾವೇ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ.
ಹಾಗಾಗಿ ನಿವೃತ್ತಿ ನಂತರವೂ ಇನ್ನೊಬ್ಬರಿಗೆ ಹೊರೆಯಾಗದೆ ತಮ್ಮ ಶಕ್ತಿ, ಬುದ್ಧಿವಂತಿಕೆ, ಪ್ರತಿಭೆ, ಹಿರಿತನ ಅನುಭವದ ಮೇಲೆ ಅನೇಕ ಉದ್ಯೋಗ ಮತ್ತಿತರ ಕೆಲಸಗಳನ್ನು ಮಾಡುವ ಮೂಲಕ ಇನ್ನೊಬ್ಬರಿಗೆ ಹೊರೆಯಾಗದಂತೆ ಬದುಕಬಹುದು.
ಇಂದು ಬಹುತೇಕ ಸಂಘ- ಸಂಸ್ಥೆ, ಕಂಪನಿಗಳಲ್ಲಿ ನಿರ್ವಹಣಾಕಾರರ (ಮ್ಯಾನೇಜ್ಮೆಂಟ್) ಕೊರತೆ ಹೆಚ್ಚುತ್ತಿದ್ದು, ಇಂಥ ಹುದ್ದೆಗಳಲ್ಲಿ ಪ್ರತಿಭಾವಂತ ಅನುಭವಿ ಹಿರಿಯ ನಾಗರಿಕರಿಗೆ ಹೆಚ್ಚಿನ ಆದ್ಯತೆ ಇದೆ. ಅಲ್ಲದೆ, ಹಿರಿಯ ನಾಗರಿಕರು ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಸಿದ್ಧರಿರುವುದರಿಂದ ಕಂಪನಿಗಳು ಇಂಥವರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತವೆ.
ಶಿಕ್ಷಣ ಕ್ಷೇತ್ರದಿಂದ ನಿವೃತ್ತಿಯಾದವರಿಗಂತೂ ಅನೇಕ ಅವಕಾಶಗಳಿದ್ದು, ಅನೇಕ ಖಾಸಗಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಅರೆಕಾಲಿಕ, ಅತಿಥಿ ಉಪನ್ಯಾಸಕರಾಗಿಯೂ ಕಾರ್ಯನಿರ್ವಹಿಸಬಹುದು. ಇಲ್ಲವೆ, ಶಾಲಾ ಮಕ್ಕಳಿಗೆ ಸಂಜೆಪಾಠ (ಟ್ಯೂಶನ್) ಕೂಡಾ ಹೇಳಬಹುದು. ಇದರಿಂದ ನಿವೃತ್ತಿಯಾದ ನಂತರ ಯಾವುದೇ ಕೆಲಸವಿಲ್ಲದೆ ಉಂಟಾಗುವು ಒಂಟಿತನ, ಬೇಸರಗಳು ಕಾಡುವುದಿಲ್ಲ.
ನಿವೃತ್ತಿ ನಂತರವೂ ಉದ್ಯೋಗ ಮಾಡಬಯಸುವ ಆಸಕ್ತ ಹಿರಿಯ ನಾಗರಿಕರಿಗೆ ಉದ್ಯೋಗ ಕುರಿತು ಮಾಹಿತಿ ನೀಡಲು ಖಜಡ್ಝ್ಠಿಜಟಜಟಿಡಿಞ್ಟಛಿಡ.್ಛ್ಟಟ, ಢ್ಟ್ಠ್ಞಿಜ್ಟ್ಠ್ಛಿಜ50.್ಛ್ಟಟ. ಸೇರಿದಂತೆ ಹಲವಾರು ವೆಬ್ಸೈಟ್ಗಳಿವೆ. ಇದರಲ್ಲಿ ಹಿರಿಯ ನಾಗರಿಕರು ತಮ್ಮ ಪ್ರತಿಭೆ, ಅನುಭವ, ಆಸಕ್ತಿಗನುಗುಣವಾದ ಉದ್ಯೋಗ ಹುಡುಕಿ ಅರ್ಜಿ ಹಾಕಬಹುದು.
ಇನ್ನು ಹಿರಿಯರು ತಮ್ಮ ಕುಟುಂಬ ಜವಾಬ್ದಾರಿಗಳು ಕಡಿಮೆಯಾಗುತ್ತಾ ಬಂದಂತೆ ಹೆಚ್ಚೆಚ್ಚು ಸಮಾಜಮುಖಿಯಾಗಬೇಕು. ಇದರಿಂದ ಸಮಯ ಸಾರ್ಥಕವಾಗುವ ಜತೆಗೆ ಮಾನಸಿಕ ಆರೋಗ್ಯವೂ ಸಮತೋಲನದಲ್ಲಿರುತ್ತದೆ.
ವೃದ್ಧಾಪ್ಯದಲ್ಲಿ ಆರ್ಥಿಕ ಸುರಕ್ಷತೆಗಾಗಿ ಮೊದಲೇ ಯೋಜನೆ ರೂಪಿಸಿಕೊಂಡರೆ ಒಳ್ಳೆಯದು. ನಿಯಮಿತ ಆದಾಯ ಇದ್ದಾಗಲೆ ವಿವಿಧ ಆಸ್ತಿಗಳಲ್ಲಿ ಹಣ ತೊಡಗಿಸಿ. ಒಂದೇ ಕಡೆ ಹಣ ವಿನಿಯೋಗಿಸುವ ಬದಲು ಜೀವವಿಮೆ, ಆರೋಗ್ಯ ವಿಮೆ, ಜಮೀನು, ಷೇರು ಖರೀದಿ, ಆರ್ಡಿ ಮತ್ತಿತರ ಕಡೆಗಳಲ್ಲಿ ಹಣ ಹೂಡಿದರೆ ನಿವೃತ್ತಿಯಂಚಿನಲ್ಲಿ ನಿಮಗೆ ಆರ್ಥಿಕ ತೊಂದರೆ ಅಷ್ಟಾಗಿ ಕಾಡದು.
ನಿವೃತ್ತಿ ನಂತರ ಹೊರಗಡೆ ದುಡಿಯಲು ಇಚ್ಛಿಸದವರು, ಮನೆಮಂದಿಯ ಕೆಂಗಣ್ಣಿಗೆ ಗುರಿಯಾಗದಂತಿರಲು ಮನೆಯವರ ಕೆಲಸ ಕಾರ್ಯಗಳಿಗೆ ಕೈಲಾದಷ್ಟು ಸಹಾಯ, ಮಾರ್ಗದರ್ಶನ ಮಾಡಬಹುದು.
ಬೇಸರ ಕಳೆಯಲು ಮನೆಯ ಸಣ್ಣ ಸಣ್ಣ ಕೆಲಸಗಳಲ್ಲಿ ತಲ್ಲೀನರಾಗಿ. ಮೊಮ್ಮಕ್ಕಳನ್ನು ಶಾಲೆಗೆ ಬಿಟ್ಟು ಬರುವ, ಕರೆತರುವ, ಬ್ಯಾಂಕ್ ವ್ಯವಹಾರಗಳು, ವಿದ್ಯುತ್, ಫೋನ್ ಬಿಲ್ ಪಾವತಿ, ಕೈತೋಟ ಬೆಳೆಸುವ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬಹುದು.
ವೃದ್ಧಾಶ್ರಮ, ಅನಾಥಾಶ್ರಮ, ಶಿಶು ಪಾಲನಾ ಕೇಂದ್ರಗಳಲ್ಲೂ ಕೆಲಸ ಮಾಡಬಹುದು. ವೃದ್ಧಾಶ್ರಮಗಳಲ್ಲಿ ಹಿರಿಯರಿಗೆ, ಅನಾಥರಿಗೆ ಅನೇಕ ಗೃಹಪಯೋಗಿ ವಸ್ತು ತಯಾರಿಕೆ, ಕಸೂತಿ, ಕೈತೋಟ ಮತ್ತಿತರ ಕುರಿತು ತರಬೇತಿ, ಮಾರ್ಗದರ್ಶನ ನೀಡುವ ಜತೆಗೆ ಅವರಿಗೆ ಸಾಂತ್ವನ, ಹಾರೈಕೆ, ಮಾನಸಿಕ ಸ್ಥೈರ್ಯ ತುಂಬುವ ಸಾಮಾಜಿಕ ಸೇವೆ ಕೂಡಾ ಮಾಡಬಹುದು.
- ಗಣೇಶ್ ಕಮ್ಲಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


